ಕೆಂಪು ಸಾರಂಗ

ಆರ್ಟಿಯೊಡ್ಯಾಕ್ಟೈಲ ಗಣದ ಸರ್ವಿಡೀ ಕುಟುಂಬಕ್ಕೆ ಸೇರಿದ ಒಂದು ಪ್ರಾಣಿ (ರೆಡ್ ಡೀರ್).  ಸರ್ವಸ್ ಎಲ್ಯಾಫಸ್ ಎಂಬುದು ಇದರ ಶಾಸ್ತ್ರೀಯ ನಾಮ.  ಯೂರೋಪ್, ಉತ್ತರ ಆಫ್ರಿಕ, ಏಷ್ಯ ಮೈನರ್ ಮತ್ತು ಉತ್ತರ ಇರಾನ್‍ಗಳ ಕಾಡುಗಳಲ್ಲಿ ವಾಸಿಸುತ್ತವೆ.  ಬ್ರಿಟಿಷ್ ದ್ವೀಪಗಳಲ್ಲಿ ಸ್ಕಾಟ್ಲೆಂಡಿನ ಪ್ರಸ್ಥಭೂಮಿಯಲ್ಲೂ ಕಂಬರ್‍ಲ್ಯಾಂಡ್ ಮತ್ತು ಎಕ್ಸ್‍ಮೂರ್‍ಗಳಲ್ಲೂ ಕಾಣ ಬರುತ್ತದೆ.

ಮಿಣಮಿಣನೆ ಮಿರುಗುವ ಕೆಂಗಂದು ಬಣ್ಣದ ದೇಹ, ಮಾಟವಾದ ಹಾಗೂ ಪ್ರಮಾಣಬದ್ಧವಾದ ಅಂಗಸೌಷ್ಠವ. ಶ್ರೀಮಂತಿಕೆಯ ಠೀವಿ, ಬೆಡಗಿನ ನಡಿಗೆ-ಇವು ಕೆಂಪುಸಾರಂಗದ ವಿಶಿಷ್ಟ ಗುಣಗಳು.   ಜಿಂಕೆಗಳ ಕುಟುಂಬದಲ್ಲೇ ಇದು ಅತ್ಯಂತ ಚೆಲುವಾದ ಪ್ರಾಣಿ.  ಚೆನ್ನಾಗಿ ಬೆಳೆದ ವಯಸ್ಕ ಗಂಡು ಸಾರಂಗದ ಎತ್ತರ 1.25-1.5ಮೀ.; ಉದ್ದ1.65-2.5ಮೀ.; ತೂಕ100-250 ಕಿ.ಮಿ.  ಗಂಡು ಸಾರಂಗದ ತಲೆಯ ಮೇಲೆ ಸುಂದರವಾದ ಎರಡು ಕೊಂಬುಗಳಿವೆ.  ಉದ್ದ ಸುಮಾರು 2.5'.  3-6 ಕವಲುಗಳಿವೆ.  ಈ ಕೊಂಬುಗಳು ಸಾರಂಗವನ್ನು ರಾಜಸಾರಂಗ ಎಂದು ಕರೆಯಲಾಗುತ್ತದೆ.  ಕೊಂಬುಗಳು ಫೆಬ್ರುವರಿ-ಮಾರ್ಚ್ ತಿಂಗಳಿನ ಸುಮಾರಿಗೆ ಉದುರಿಹೋಗುತ್ತವೆ.  ಮತ್ತೆ ಏಪ್ರಿಲ್ ತಿಂಗಳಿನಲ್ಲಿ ಹೊಸ ಕೊಂಬುಗಳು ಮೊಳೆಯಲಾರಂಭಿಸಿ ಜುಲೈ ವೇಳೆಗೆ ಪೂರ್ಣವಾಗಿ ಬೆಳೆದು ನಿಲ್ಲುತ್ತವೆ.  ಈ ಸಮಯದಲ್ಲಿ ಕೊಂಬುಗಳ ಮೇಲೆ ಮಖಮಲ್ಲಿನಂಥ ಮೃದುವಾದ ಹೊದಿಕೆಯಿದ್ದು ಕೊಂಬುಗಳು ಸೂಕ್ಷ್ಮವೇದಿಗಳಾಗಿರುತ್ತವೆ. ಆಗಸ್ಟ್ ತಿಂಗಳಿನ ಅನಂತರ ಈ ಹೊದಿಕೆ ಸುಲಿದು ಬೀಳುತ್ತದೆ.  ಅಪೂರ್ವವಾಗಿ, ಕೊಂಬುಗಳಿಲ್ಲದ ಗಂಡು ಸಾರಂಗಗಳೂ ಇರುವುದುಂಟು.  ಕೆಂಪು ಸಾರಂಗದ ದೇಹದ ಬಣ್ಣ ಮಾಗಿಯಲ್ಲಿ ಬೂದು ಬಣ್ಣಕ್ಕೆ ತಿರುಗುತ್ತದೆ.  ಕೆಲವು ಸಾರಂಗಗಳಲ್ಲಿ ಬೆನ್ನಿನ ಮೇಲೆ ಕಗ್ಗಂದು ಬಣ್ಣದ ಪಟ್ಟೆಯೊಂದಿರುವುದುಂಟು.  ಎಲ್ಲ ಸಾರಂಗಗಳಲ್ಲೂ ಪೃಷ್ಠ ಭಾಗದಲ್ಲಿ ಕಿತ್ತಳೆ ಬಣ್ಣದ ಗುರುತಿರುತ್ತದೆ.

ಕೆಂಪು ಸಾರಂಗ ಸಣ್ಣ ಗುಂಪುಗಳಲ್ಲಿ ಜೀವನ ನಡೆಸುವ ಪ್ರಾಣಿ.  ಗುಂಪಿನ ಎಲ್ಲ ಸಾರಂಗಗಳಿಗಿಂತ ಹೆಚ್ಚು ವಯಸ್ಸಾದ ಆದರೆ ಇನ್ನೂ ಮರಿಹಾಕುವ ಸಾಮಥ್ರ್ಯವನ್ನುಳ್ಳ ಹೆಣ್ಣುಸಾರಂಗವೇ ಗುಂಪಿನ ಮುಂದಾಳು, ಅದರ ಮರಿಗಳು ಮತ್ತು ಅವುಗಳ ಮರಿಗಳೇ ಗುಂಪಿನ ಇತರ ಸದಸ್ಯರು.  ವಯಸ್ಕ ಗಂಡು ಸಾರಂಗಗಳು ಸಂತಾನೋತ್ಪತ್ತಿಯ ಕಾಲದಲ್ಲಿ ಮಾತ್ರ ಗುಂಪಿನಲ್ಲಿದ್ದು ಉಳಿದ ತಿಂಗಳುಗಳಲ್ಲಿ ಒಂಟಿಯಾಗಿ ಜೀವಿಸುತ್ತವೆ.  ಗುಂಪಿನ ಯೋಗಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳುವ ಮುಂದಾಳು ಗುಂಪಿಗೆ ಅಪಾಯ ಸನ್ನಿಹಿತವಾಗಿದೆಯೆಂದು ಅರಿತಾಗ ಉಚ್ಚಸ್ವರದಲ್ಲಿ ಕೂಗುತ್ತದೆ.  ತತ್‍ಕ್ಷಣ ಇಡೀ ಗುಂಪೇ ಮೇಯುವುದನ್ನು ನಿಲ್ಲಿಸಿ ಸ್ತಬ್ಧವಾಗುತ್ತದೆ.  ಎಲ್ಲ ಸರಿಯಾಗಿದೆ ಎಂದು ನಾಯಕಿ ಮತ್ತೊಮ್ಮೆ ಸೂಚನೆ ಕೊಡುವ ತನಕ ಹೀಗೆಯೇ ನಿಂತಿದ್ದು ಅನಂತರ ಅದನ್ನು ಹಿಂಬಾಲಿಸಿ ಮುಂದೆ ಸಾಗುತ್ತವೆ.

ಕೆಂಪು ಸಾರಂಗಕ್ಕೆ ಅತ್ಯಂತ ಚುರುಕಾದ ದೃಷ್ಟಿ, ಘ್ರಾಣ ಹಾಗೂ ಶ್ರವಣಶಕ್ತಿಗಳಿವೆ.  ಇದು ಚೆನ್ನಾಗಿ ಈಜಲೂ ಬಲ್ಲುದು.  ಲೈಮ್, ಬೀಚ್, ಬರ್ಜ್, ಆಲ್ಡರ್, ಹೇಜಲ್, ಮುಂತಾದ ಮರಗಳ ಹಾಗೂ ಕುರುಚಲು ಗಿಡಗಳ ಚಿಗುರೆಲೆಗಳು ಮತ್ತು ಎಳೆಯ ಗರಿಕೆ ಇದರ ಅಚ್ಚುಮೆಚ್ಚಿನ ಆಹಾರ.  ಮೇಯುವ ಕಾಲ ಮುಚ್ಚಂಜೆ ಹಾಗೂ ಬೆಳಗಿನ ಜಾವ.

ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳು ಕೆಂಪುಸಾರಂಗದ ಬೆದೆಗಾಲ.  ಈ ಕಾಲದಲ್ಲಿ ಗಂಡುಗಳು ಹೆಣ್ಣುಗಳನ್ನು ಹುಡುಕುತ್ತ ಅಲೆದಾಡುತ್ತವೆ. ಸಾಮಾನ್ಯವಾಗಿ ಒಂದು ಮೈಲಿ ಸುತ್ತಳತೆಯಲ್ಲೇ ಸುತ್ತಾಡುವುದಾದರೂ ಕೆಲವೊಮ್ಮೆ ದಿನವೊಂದಕ್ಕೆ 20 ಮೈಲಿ ದೂರ ಕ್ರಮಿಸುವುದುಂಟು.  ಹೆಣ್ಣುಗಳಿಗಾಗಿ ಗಂಡು ಸಾರಂಗಗಳು ಆಕ್ರೋಶದಿಂದ ಅಸೂಯೆಯಿಂದ ಜೋರಾಗಿ ಗರ್ಜಿಸುತ್ತ, ಪರಸ್ಪರ ಹೋರಾಡುತ್ತವೆ.  ಈ ರೀತಿ ಹೋರಾಡಿ ಒಂದೊಂದು ಗಂಡೂ ಹಲವಾರು ಹೆಣ್ಣುಗಳನ್ನು ಪಡೆಯುವುದುಂಟು.  ಮರಿಹಾಕುವ ಕಾಲ ಮೇ-ಜೂನ್ ತಿಂಗಳುಗಳು.  ಗರ್ಭಧಾರಣೆಯ ಅವಧಿ 8 ತಿಂಗಳುಗಳು.  ಸೂಲಿಗೆ ಒಂದೇ ಮರಿ.  ಮರಿಯ ಮೈಮೇಲೆ ಬಿಳಿಯ ಚುಕ್ಕೆಗಳಿರುತ್ತವೆ.  ಹುಟ್ಟಿದ ಕ್ಷಣದಿಂದಲೇ ಮರಿ ನಿಲ್ಲಲೂ ಓಡಾಡಲೂ ಸಾಮಥ್ರ್ಯವುಳ್ಳದ್ದಾದರೂ ಅದರ ತಾಯಿ, ಮರಿಯನ್ನು ಯಾವುದಾದರೂ ಪೊದೆಯಲ್ಲಿ ಅಡಗಿಸಿಟ್ಟು ಅದರಿಂದ ಹೆಚ್ಚು ದೂರ ಹೋಗದೆ, ಆಗಿಂದಾಗ್ಗೆ ಮರಿಯ ಬಳಿ ಬಂದು ಹಾಲುಣ್ಣಿಸುತ್ತದೆ.

ಇದನ್ನ ಮಾಂಸಕ್ಕಾಗಿಯೂ ಕೊಂಬುಗಳಿಗಾಗಿಯೂ ಯೂರೋಪ್ ಮುಂತಾದೆಡೆಗಳಲ್ಲಿ ಇದನ್ನು ಬೇಟೆಯಾಡುತ್ತಾರೆ.  ಹೀಗಾಗಿ ಇದರ ವಂಶ ಕ್ಷೀಣಿಸುತ್ತಿದೆ. 									   
(ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ